ಪಪಾವರೇಸೀ -
	ರೋಯಡೇಲೀಸ್ ಗಣಕ್ಕೆ ಸೇರಿದ ಸಸ್ಯಕುಟುಂಬ. ಸುಮಾರು 28 ಜಾತಿ ಮತ್ತು 250 ಪ್ರಭೇದಗಳನ್ನು ಒಳಗೊಂಡಿದೆ. ಇವು ಬಹುತೇಕವಾಗಿ ಮೂಲಿಕೆಗಳು. ಅಪರೂಪವಾಗಿ ಪೊದೆಗಳು. ಪ್ರಪಂಚದಲ್ಲೆಲ್ಲ ವ್ಯಾಪಕವಾಗಿ ಹರಡಿವೆ. ಆದರೆ ಉತ್ತರ ಸಮಶೀತೋಷ್ಣ ಪ್ರದೇಶದಲ್ಲಿ ತುಂಬ ಹೇರಳ. ದಕ್ಷಿಣಾರ್ಧಗೋಲದಲ್ಲಿ ಅಪರೂಪ. ಅನೇಕವು ಬಲು ಹೆಸರುಪಡೆದ ಅಲಂಕಾರ ಸಸ್ಯಗಳು. ಗಿಡದ ತುಂಬ ರಸವುಂಟು. ಇದು ಸಾಮಾನ್ಯವಾಗಿ ಹಾಲಿನಂತೆ ಬೆಳ್ಳಗಿದೆ. ಹಲವು ಸಲ ಇದು ಹಳದಿ ಬಣ್ಣದ್ದಾಗಿರಬಹುದು. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಅಪೂರ್ವವಾಗಿ ಗಿಡದ ಮೇಲಿನ ರೆಂಬೆಗಳ ಎಲೆಗಳು ಅಭಿಮುಖ ಅಥವಾ ವರ್ತುಲ ಮಾದರಿಯಲ್ಲಿರಬಹುದು. ಎಲೆಗಳು ಅಖಂಡವಾಗಿರಬಹುದು ಇಲ್ಲವೆ ಹಲವಾರು ಖಂಡಗಳಾಗಿ ವಿಂಗಡಗೊಂಡಿರಬಹುದು. ಹೂಗಳು ಒಂಟೊಂಟಿಯಾಗಿ ಅರಳುವುವು; ದ್ವಿಲಿಂಗಿಗಳು. ಪ್ರತಿ ಹೂವಿನಲ್ಲಿ 2-3 ಪುಷ್ಪ ಪತ್ರಗಳು. 4-6 ದಳಗಳು, ಅನೇಕ ಕೇಸರಗಳು, 2 ಅಥವಾ ಹಲವು ಕಾರ್ಪೆಲುಗಳಿಂದ ರಚಿತವಾಗಿ ಅಂಡಾಶಯ ಇರುವುವು. ಅಂಡಕಗಳು ಅಸಂಖ್ಯ. ಫಲ ಸಂಪುಟ (ಕ್ಯಾಪ್ಸೂಲ್) ಮಾದರಿಯದು.

	ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದೆ ಎರಡು ಜಾತಿಗಳಿವೆ. ಒಂದು ಗಸಗಸೆ ಗಿಡ (ಪಪಾವರ್ ಸಾಮ್ನಿಫೆರಮ್), ಇನ್ನೊಂದು ದತ್ತೂರಿ ಗಿಡ, (ಆರ್ಜಿಮೋನ್ ಮೆಕ್ಸಿಕಾನ). ವೈದ್ಯದಲ್ಲಿ ತುಂಬ ಪ್ರಮುಖವಾದ ಮಾರ್ಫೀನ್, ಕೋಡೀನ್‍ಗಳೆಂಬ ಸಸ್ಯಕ್ಷಾರಗಳನ್ನು ಕೊಡುವ ಅಫೀಮಿನಿಂದಾಗಿ ಗಸಗಸೆ ಜಗತ್ಪ್ರಖ್ಯಾತ. ಅಪಕ್ವ ಫಲಗಳನ್ನು ಗೀರಿ ಪಡೆಯಲಾಗುವ ರಸವನ್ನು ಒಣಗಿಸಿ ಪಡೆದ ವಸ್ತುವೇ ಅಫೀಮು. ಅಡಿಗೆಗೆ ಬಳಸುವ ಗಸಗಸೆ ಇದರ ಬೀಜ. ಇದರಲ್ಲಿ ಮಾರ್ಫೀನ್ ಇರುವುದಿಲ್ಲ. ಮೆಕ್ಸಿಕೋದಿಂದ ಬಂದು ಭಾರತದಲ್ಲೆಲ್ಲ ಹರಡಿರುವ ದತ್ತೂರದ ಗಿಡದ ಉಲ್ಲೇಖ ಮೊಗಲರ ಕಾಲದಲ್ಲಿ ರಚಿತವಾದ ಭಾವಪ್ರಕಾಶವೆಂಬ ಆಯುರ್ವೇದ ಗ್ರಂಥದಲ್ಲೂ ಬರುತ್ತದೆ. ಚರ್ಮವ್ಯಾಧಿಗೆ ಇದು ಒಳ್ಳೆಯ ಔಷಧ. ಬೀಜಗಳಲ್ಲಿ ಅಖಾದ್ಯವಾದ ಕಟು ಎಣ್ಣೆಯುಂಟು.

(ಕೆ.ಎಚ್.ಕೆ.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ